ಕೆರೆಯಲ್ಲಿ ಜಾನುವಾರು ಮೈ ತೊಳೆಯಲು ಹೋಗಿ ಇಬ್ಬರು ಯುವಕರು ನೀರುಪಾಲು .
0 Comments । By Black Cat News । 24 August, 2021
ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಚಿಕ್ಕನೇರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಿಕಲ್ಲು ಗ್ರಾಮದ ಬಾಲಕೆರೆಯಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹಸುವಿನಕಾವಲು ಗ್ರಾಮದ ದರ್ಶನ್ (21) ಹಾಗೂ ರಂಜಿತ್(19) ಮೃತಪಟ್ಟ ದುರ್ದೈವಿಗಳು. ಸೋಮವಾರ ಬೆಳಿಗ್ಗೆ ಕೆರೆಯಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದಾಗ ದರ್ಶನ್ ಜಾನುವಾರು ಹಗ್ಗದ ಸಮೇತ ಕೆರೆಯೊಳಗೆ ಜಾರಿದ್ದಾರೆ. ನಂತರ ಈಜು ಬಾರದೆ ಕೂಗುತ್ತಿದ್ದನ್ನು ಪಕ್ಕದಲ್ಲಿ ಮತ್ತೊಂದು ಜಾನುವಾರು ತೊಳೆಯುತ್ತಿದ್ದ ರಂಜಿತ್ ಗಮನಿಸಿ ಕಾಪಾಡಲು ನೀರಿನೊಳಗೆ ಇಳಿದನು. ಆದರೆ ಆತನಿಗೂ ಈಜು ಬಾರದೆ ಕೂಗಾಡುತ್ತಿದ್ದನ್ನು ಮತ್ತೋರ್ವ ಚೇತನ್ ಎಂಬ ಮತ್ತೊಬ್ಬ ಯುವಕ ಗಮನಿಸಿ ಸ್ಥಳೀಯರನ್ನು ಕಾಪಾಡಲು ಕರೆದಿದ್ದಾನೆ. ಆದರೆ ಅಷ್ಟರಲ್ಲಿ ಇಬ್ಬರು ಮುಳುಗಿ ಸ್ಥಳದಲ್ಲೇ ಮೃತಪಟ್ಟರು. ಸ್ಥಳೀಯ ಈಜುಗಾರರ ಸಹಾಯದಿಂದ ಮೃತದೇಹಗಳನ್ನು ಕೆರೆಯಿಂದ ಮೇಲೆ ತೆಗೆಯಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲರೂ ಕೆರೆಯ ಬಳಿ ಜಮಾಯಿಸಿದ್ದರು. ಮೃತದೇಹ ಹೊರಗೆ ತೆಗೆಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಶವಗಳನ್ನು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ಈ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಮೃತ ದರ್ಶನ್ ತಂದೆ ಬೀರೇಗೌಡ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
PUNEETH CG's Report
BlackCatNews, Mysore