ಶಿಕ್ಷಕರ ದಿನಾಚರಣೆ: 18 ಮಂದಿ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.
0 Comments । By Black Cat News । 6 September, 2021
ಚಿಕ್ಕಬಳ್ಳಾಪುರ: ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ನಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕರಾಗಿ ಆಯ್ಕೆಗೊಂಡ ಜಿಲ್ಲೆಯ ಕಿರಿಯ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ 18 ಮಂದಿ ಶಿಕ್ಷಕರಿಗೆ ಜಿಲ್ಲಾಡಳಿತದ ಪರವಾಗಿ ಸಚಿವ ಡಾ.ಕೆ.ಸುಧಾಕರ್, ಶಾಲು ಹೊದಿಸಿ ಹಣ್ಣು ಹಂಪಲು, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ವಿತರಿಸಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್. ಹೊಸ ಶಿಕ್ಷಣ ನೀತಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಮಹತ್ತರವಾದ ಬದಲಾವಣೆ ತರಲಿದೆ. ಆ ಮೂಲಕ ದೇಶದ ಅಭಿವೃದ್ದಿಯನ್ನು ಹಾಗೂ ಭವಿಷ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಜೊತೆಗೆ ಅಸಮಾನತೆ, ತಾರತಮ್ಯಗಳಿಗೆ ಯಾವುದೇ ರೀತಿಯ ಅವಕಾಶ ನೀಡದೇ ಎಲ್ಲರಿಗೂ ಸಮನಾದ ಅವಕಾಶಗಳನ್ನು ಈ ಶಿಕ್ಷಣ ನೀತಿಯಿಂದ ಸಿಗಲಿದೆ.
ಯಾವುದೇ ವ್ಯಕ್ತಿಯ ವ್ಯಕ್ತಿಯ ನಿರ್ಮಾಣ ಶಿಕ್ಷಕ ಹಾಗೂ ಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಉತ್ಸಾಹದಿಂದ ಪಾಠಗಳನ್ನು ಹೇಳಿಕೊಡಬೇಕು. ಯಾವ ಮಗುವಿಗೆ ಯಾವ ವಿಷಯದಲ್ಲಿ ಅಭಿರುಚಿ ಇದೆ ಎಂಬುದನ್ನು ಮನಗಂಡು ಪ್ರೇರಣೆ ನೀಡಬೇಕು. ಇಂದು ಅನೇಕರು ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ ಅವರ ಸಾಧನೆಯ ಹಿಂದೆ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಶಿವಶಂಕರ್, ಎಸ್.ಪಿ.ಮಿಥುನ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಸೇರಿದಂತೆ ಹಲವರು ಇದ್ದರು.
Balaji R's Report
BlackCatNews, Chikkaballapur