ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯವಷ್ಟೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ.
0 Comments । By Black Cat News । 3 September, 2021
ಚಿಕ್ಕಬಳ್ಳಾಪುರ (ಗುಡಿಬಂಡೆ): ನಾನು ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ ವಿನಃ ಚುನಾವಣೆಯ ನಂತರ ಯಾವುದೇ ಕಾರಣಕ್ಕೂ ರಾಜಕೀಯ ಮಾಡಲ್ಲ, ಎಲ್ಲ ಪಕ್ಷದವರು ತಮ್ಮ ಸಮಸ್ಯೆಗಳನ್ನು ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳಬಹುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಘೋಷಣೆಯಾದ ಬಳಿಕ ಹಾಗೂ ಚುನಾವಣೆ ಮುಗಿಯುವ ತನಕ ಮಾತ್ರ ನಾನು ರಾಜಕೀಯ ಮಾಡುತ್ತೇನೆ. ಚುನಾವಣೆಯ ನಂತರ ನನಗೆ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ಮತದಾರರಾದ ತಾವುಗಳು ಯಾವುದೇ ಪಕ್ಷದವರಾಗಲಿ ಅಥವಾ ಯಾವುದೇ ಜಾತಿಯವರಾಗಲಿ ತಮ್ಮ ಸಮಸ್ಯೆಗಳ ಕುರಿತು ನನಗೆ ತಿಳಿಸಿ, ಅವುಗಳನ್ನು ತೀರಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರದಿಂದ ಅನೇಕ ಸೌಲಭ್ಯಗಳು ಬರುತ್ತಿದ್ದು, ಅವನ್ನು ಪಡೆಯಲು ಸಾರ್ವಜನಿಕರು ನೇರವಾಗಿ ನನ್ನನ್ನು ಸಂಪರ್ಕಿಸಿ. ಈಗಾಗಲೇ ಅನೇಕರು ನನ್ನ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವುಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ನಿಮಗೆ ನನ್ನ ಮೇಲೆ ನಂಬಿಕೆಯಿದ್ದರೆ ಮಾತ್ರ ಮತ ನೀಡಿ, ಇಲ್ಲವಾದಲ್ಲಿ ತಿರಸ್ಕರಿಸಿ ಎಂದ ಅವರು, ಈಗಾಗಲೇ ಕೊರೋನಾ ಸೋಂಕು ಎಲ್ಲರನ್ನೂ ಬಾದಿಸುತ್ತಿದೆ. ನಾನೂ ಸಹ ೨ ತಿಂಗಳು ಸೋಂಕಿನಿಂದ ಬಳಲಿದ್ದೇನೆ. ಆದ್ದರಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದರು.
ನಂತರ ಮಾಜಿ ಜಿ.ಪಂ. ಸದಸ್ಯ ಕೃಷ್ಣಪ್ಪ ಮಾತನಾಡಿ, ಕ್ಷೇತ್ರದಾದ್ಯಂತ ಶಾಸಕರು ತುಂಬಾ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿಯೇ ಮಾದರಿ ಶಾಸಕರಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ನಿವೇಶನ ರಹಿತ ಪ್ರತಿಯೊಬ್ಬರಿಗೂ ಮನೆ ನೀಡುವ ಮಹತ್ವಾಕಾಂಕ್ಷೆ ಯೋಜನೆ ಹಾಕಿಕೊಂಡಿದ್ದಾರೆ. ನಾನು ಜಿ.ಪಂ. ಸದಸ್ಯನಾಗಿದ್ದ ಅವಧಿಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೇ ಮತಷ್ಟು ಅಭಿವೃದ್ದಿ ಯೋಜನೆಗಳನ್ನು ಸೋಮೇನಹಳ್ಳಿ ಜಿ.ಪಂ. ಕ್ಷೇತ್ರದಲ್ಲಿ ಕೈಗೊಳ್ಳುತ್ತೇನೆ ಎಂದರು.
ಇದೇ ವೇಳೆ ವರ್ಲಕೊಂಡ ಗ್ರಾ.ಪಂ. ವ್ಯಾಪ್ತಿಯ ಬಡವರಿಗೆ ದಿನಸಿ ಕಿಟ್ಗಳನ್ನು ವಿತರಣೆ ಮಾಡಿದ ಶಾಸಕರು, ವರ್ಲಕೊಂಡ ಪ್ರೌಢಶಾಲೆಯಲ್ಲಿನ ಕೋವಿಡ್ ಲಸಿಕಾ ಬೂತ್ಗೆ ತೆರಳಿ ಲಸಿಕೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣೇಗೌಡ, ರಘುನಾಥರೆಡ್ಡಿ, ಪ್ರೆಸ್ ಸುಬ್ಬರಾಯಪ್ಪ, ಶಿಕ್ಷಣ ಇಲಾಖೆಯ ಟಿಪಿಒ ಪ್ರಕಾಶ್, ಇಸಿಒ ಚಂದ್ರಶೇಖರ್ ಸೇರಿದಂತೆ ವರ್ಲಕೊಂಡ ಗ್ರಾ.ಪಂ. ಮುಖಂಡರುಗಳು ಹಾಜರಿದ್ದರು.
Balaji R's Report
BlackCatNews, Chikkaballapur